ಲುಡ್ವಿಗ್ ಅಖಿಂ ವಾನ್ ಆರ್ನೀಮ್ (26 ಜನವರಿ 1781 – 21 ಜನವರಿ 1831) ಹತ್ತೊಂಬತ್ತನೆಯ ಶತಮಾನದ ರೊಮ್ಯಾಂಟಿಕ್ ಯುಗದ ಜರ್ಮನಿಯ ಕವಿ. ವಿದ್ಯಾರ್ಥಿ ದೆಶೆಯಲ್ಲಿದ್ದಾಗಲೇ ಗಯಟೆ ಹಾಗೂ ಹರ್ಡರ್ ಮುಂತಾದ ಜರ್ಮನ್ ಕವಿಗಳ ಪ್ರಭಾವಕ್ಕೊಳಗಾಗಿ ಜರ್ಮನಿಯ ಜನಪದ ಕಥೆಗಳನ್ನು, ಐತಿಹ್ಯ ಪರಂಪರೆಯನ್ನು ಆಳವಾಗಿ ಅಭ್ಯಸಿಸಿದ. ಯುರೋಪಿನಲ್ಲೆಲ್ಲ ಪ್ರವಾಸ ನಡೆಸಿ ಹೈಡೆಲ್ಬರ್ಗ್ ಪಟ್ಟಣದಲ್ಲಿ ಬ್ರೆಂಟಾನೋ ಎಂಬ ಇನ್ನೊಬ್ಬ ಪ್ರತಿಭಾವಂತ ಕವಿಯೊಡನೆ ಕಲೆತು ಜರ್ಮನ್ ಜನಪದ ಗೀತೆಗಳ, ಐತಿಹ್ಯಗಳ ಅತ್ಯಮೂಲ್ಯ ಸಂಗ್ರಹವೊಂದನ್ನು ಸಂಪಾದಿಸಿದ. ಜರ್ಮನಿಯ ಕವಿಗಳಿಬ್ಬರೂ ಜರ್ಮನಿಯ ಕಿರಿಯ, ಕ್ರಾಂತಿಕಾರಕ ಸಾಹಿತಿಗಳ ನೇತಾರರಾಗಿ, ರೊಮ್ಯಾಂಟಿಕ್ ಚಳವಳಿಯ ಆದ್ಯಪ್ರವರ್ತಕರಾದರು. ಜರ್ಮನಿಯ ಪುರಾತನ ಜಾನಪದ ಪರಂಪರೆಯತ್ತ ಕವಿಗಳ ಕಣ್ಣು ಸೆಳೆದು, ಇವರು ಜರ್ಮನಿಯ ಸಾಹಿತ್ಯದ ಉತ್ಕರ್ಷಕ್ಕೆ ಪರೋಕ್ಷವಾಗಿಯೂ ನೆರವಾದರು. ಇವೆಲ್ಲದರ ಜತೆಗೆ ಆರ್ನೀಮ್ ಬರೆದ ಹಲವು ಕಿರುಕಾದಂಬರಿಗಳೂ ಎರಡು ಸಂಪುಟಗಳುಳ್ಳ ರಮ್ಯಕಥೆಯೂ ಇವನಿಗೆ ಅಪಾರ ಕೀರ್ತಿ ಗಳಿಸಿಕೊಟ್ಟವು. == ಬಾಹ್ಯ ಸಂಪರ್ಕಗಳು ==